The Review

Thursday, June 22, 2006

Dweepa - Kannada film

http://www.imdb.com/title/tt0330241/

Girish Kasaravalli on Dweepa

http://hinduonnet.com/thehindu/fr/2002/08/02/stories/2002080200040100.htm

ಚಿತ್ರ: ದ್ವೀಪ

ನಿರ್ದೇಶನ: ಗಿರೀಶ್ ಕಾಸರವಳ್ಳಿ

ಇಡೀ ಚಿತ್ರವು ನಾಕು ಪಾತ್ರಗಳ ಸುತ್ತ ಸುತ್ತುತ್ತದೆ - ದುಗ್ಗಜ್ಜ (ವಾಸುದೇವ ರಾವ್), ಗಣಪ (ಅವಿನಾಶ್), ನಾಗಿ (ಸೌಂದರ್ಯ) ಮತ್ತು ಕೃಷ್ಣ (ಹರೀಶ್). ಭೂತಕ್ಕೆ ನೇಮ ಕಟ್ಟಿ ಬದುಕುವ ವಯಸ್ಸಾದ ಮುದುಕ ದುಗ್ಗಜ್ಜ. ಅವನಿಗೆ ಈ ನೇಮದ ಸಂಪ್ರದಾಯದಲ್ಲಿ ಬಹಳ ನಂಬಿಕೆ ಮತ್ತು ಅದಕ್ಕಿಂತ ಅದರ ಬಗ್ಗೆ ಹೆಮ್ಮೆ. ನಂಬಿಕೆಗಿಂತ ಅಭಿಮಾನ ಮತ್ತು ಅಹಂಕಾರವೇ ಹೆಚ್ಚಾಗಿರುವ ಅವನ ಮಗ ಗಣಪ. ಈತ ಜೀವನವನ್ನು ಎದುರಿಸಲು ಧೈರ್ಯವಿಲ್ಲದ ಹೇಡಿ, ಹಾಗೆಯೆ ಅಮ್ಮಾವ್ರ ಗಂಡ ಎಂದು ಒಪ್ಪಿಕೊಳಲು ಇಷ್ಟಪಡದ ಅಹಂಕಾರಿ. ತಂದೆಯ ಮತ್ತು ವಂಶದ ಹಿರಿಮೆಯ ಮುಸಿಕಿನಲ್ಲೇ ಇರುವ ಸ್ವಂತ ವ್ಯಕ್ತಿತ್ವ ಇಲ್ಲದ ಪಾತ್ರ. ನಾಗಿ, ಪಟ್ಟಣದಲ್ಲಿ ಓದಿ ದುರಾದೃಷ್ಟದಿಂದ ತನಗೆ ಯಾವ ರೀತಿಯಲ್ಲೂ ಸಮನಾಗದ ಗಣಪನ ಹೆಂಡತಿ. ಅತ್ತ ತಾನೆ ಸಂಸಾರದ ಚುಕ್ಕಾಣಿ ಹಿಡಿಯುವಷ್ಟು ಜಾಣೆ, ಆತ್ಮವಿಶ್ವಾಸಿ ಮತ್ತು ಸ್ವತಂತ್ರಳೂ ಅಲ್ಲಾ ಇತ್ತಾ ಏನೂ ತಿಳಿಯದ ಸಾಧಾರಣ ಹಳ್ಳಿಯ ಹೆಂಗಸೂ ಅಲ್ಲಾ. ಸದಾ ಪ್ರಗತಿಯ ಕನಸು ಕಾಣುವ ಆದರೆ ವಾಸ್ತವದಲ್ಲಿ ಬದುಕುವ ಜೀವನೋತ್ಸಾಹ ತುಂಬಿರುವ ಪಾತ್ರ. ಇನ್ನು ಉತ್ತರಾರ್ಧದಲ್ಲಿ ಬರುವ ಪಾತ್ರ ಕೃಷ್ಣ. ವ್ಯಾಪಾರದಲ್ಲಿ ಸೋತು, ಪ್ರೀತಿಯಲ್ಲಿ ಸೋತು ಆತ್ಯಹತ್ಯೆಗೆ ಪ್ರಯತ್ನಿಸಿ ಅದರಲ್ಲೂ ಸೋತು ಯಾರಿಗೂ ಬೇಡವಾದ ದಂಡಪಿಂಡಗಳ ಸಾಲಿಗೆ ಸೇರಿದವನು:). ಈ ದುಗಜ್ಜ, ಗಣಪ ಮತ್ತು ನಾಗಿ ಈ ಮೂರು ಪಾತ್ರಗಳು ತಾವು ವಾಸಿಸುವ ಸೀತಾ ಪರ್ವತವು ಅಣೆಕಟ್ಟು ನಿರ್ಮಾಣದಿಂದ ಮುಳುಗುವ ಸಂದರ್ಭ ಬಂದಾಗ ಹೇಗೆ ಈ ಪರಿಸ್ಥಿತಿಗೆ ಪ್ರತಿಕ್ರಿಯಿಸುತ್ತದೆ ಎನ್ನುವುದೇ ಕತೆ. ಸಾಮಾಜಿಕ ಬದಲಾವಣೆಯು ಹೇಗೆ ಒಂದು ಕುಟುಂಬದ ಮೆಲೆ ಪರಿಣಾಮ ಬೀರುತ್ತದೆ ಎನ್ನುವುದೇ ಚಿತ್ರದ ಮೂಲ ಉದ್ದೇಶ. ಆ ಮಟ್ಟಿಗೆ ಇದು ಕಾಸರವಳ್ಳಿಯವರ ಇತರ ಚಿತ್ರಗಳು, ವಿಶೇಷವಾಗಿ "ತಾಯಿಸಾಹೇಬ" ಚಿತ್ರವನ್ನು ಹೋಲುತ್ತದೆ. ಆದರೆ ಇಲ್ಲಿ ಸಾಮಾಜಿಕ ಘರ್ಷಣೆಗಳಿಗಿಂತ ವೈಯಕ್ತಿಕ ಘರ್ಷಣೆಗಳೇ ಮುಖ್ಯವಾಗುತ್ತವೆ.


ಮೊದಲು, ದುಗಜ್ಜ ಮತ್ತು ಗಣಪನಿಗೆ ಅಣೆಕಟ್ಟು ಮುಳುಗಡೆ ಪರಿಹಾರ ತೆಗೆದು ಕೊಳ್ಳಲು ಅಭ್ಯಂತರವೇನು ಇರುವುದಿಲ್ಲಾ. ಆದರೆ ಜನರ ಧಾರ್ಮಿಕ ನಂಬಿಕೆಗಳಿಗೆ ತಕ್ಕಂತೆ, ಅವರ ಮರ್ಯಾದೆಗೆ ತಕ್ಕಂತೆ ಪರಿಹಾರ ಕೊಡಬೇಕು ಎನ್ನುವುದು ಅವರ ವಾದ. ಇದು ದುಗ್ಗಜ್ಜ ಮತ್ತು ಮುಳುಗಡೆ ಆಫೀಸರ್ ನಡುವೆ ನಡೆಯುವ ಸಂಭಾಷಣೆಯಲ್ಲಿ ಚೆನ್ನಾಗಿ ಚಿತ್ರಿತವಾಗಿದೆ. ಧಾರ್ಮಿಕ ನಂಬಿಕೆಗಳ ಮೌಲ್ಯವನ್ನು ನಿರ್ಧರಿಸುವಲ್ಲಿ ಹೇಗೆ ಆರ್ಥಿಕ ವ್ಯವಸ್ಥೆಯು ಸೋಲುತ್ತದೆ ಎಂಬುದು ನಿರೂಪಿತವಾಗಿದೆ. ಇಲ್ಲಿಂದ ಘರ್ಷಣೆಗಳು ಪ್ರಾರಂಭವಾಗುತ್ತದೆ. ವಾದದಲ್ಲಿ ತನಗುಂಟಾದ ಸೋಲಿನಿಂದ ದುಗ್ಗಜ್ಜ ಕುಪಿತನಾಗುತ್ತಾನೆ. ಪರಂಪರಾಗತವಾಗಿ ನಡೆದು ಬಂದ ಆಚರಣೆಯನ್ನು ಕಡೆಗಣಿಸುವ ಸರ್ಕಾರದ ನಿಲುವು ಅವನಿಗೆ ಹುಚ್ಚುತನವೆಂದು ಅನ್ನಿಸುತ್ತದೆ. ಅದೇ ರೀತಿ ಆಫೀಸರ್‍ ನೀಡಿದ ಸಮಜಾಯಿಶಿ ಅವನಿಗೆ ಹಿಡಿಸುವುದಿಲ್ಲ. ಅವನು ತನ್ನ ನಂಬಿಕೆಗಳಿಂದ ತನ್ನನ್ನು ಸಮಾಜದಿಂದ ಬೇರ್ಪಡಿಸುವ ದ್ವೀಪ ಕಟ್ಟಲು ಪ್ರಾರಂಭಿಸುತ್ತಾನೆ! ಸೀತಾ ಪರ್ವತ ಮುಳುಗುವುದೇ ಇಲ್ಲಾ, ನಾನು ಇದನ್ನು ಬಿಟ್ಟು ಬೇರೆಲ್ಲೂ ಹೋಗಲ್ಲಾ ಎಂದು ಹಟ ಹಿಡಿಯುತ್ತಾನೆ. ಗಣಪನಿಗೆ ಸಿಗುವ ಸ್ವಲ್ಪ ಪರಿಹಾರದಿಂದ ಹೇಗೆ ಜೀವನ ನಡೆಸುವುದು ಎಂಬ ಚಿಂತೆ. ತಂದೆಯ ನೆರಳಿನಲ್ಲೇ ಬದುಕಿರುವ ಅವನಿಗೆ ತಾನೆ ಬೇರೆ ಉದ್ಯೋಗ ಮಾಡಿ ಬದುಕಲು ಸಾಧ್ಯ ಎಂಬ ವಿಶ್ವಾಸ ಇಲ್ಲಾ. ಆದ್ದರಿಂದ ಅವನೂ ದುಗ್ಗಜ್ಜನ ನಿರ್ಧಾರಕ್ಕೆ ಸಮ್ಮತಿಸುತ್ತಾನೆ. ಆದರೆ ನಾಗಿಗೆ ಇದು ಇಷ್ಟವಾಗುವುದಿಲ್ಲ. ನೇಮ ಮಾಡುವುದು ಬಿಟ್ಟು ಬೇರೆ ಯಾವುದಾದರು ಬೇರೆ ಕೆಲಸ ಮಾಡುಬೇಕೆನ್ನುವುದು ಅವಳ ಆಸೆ. ಇದು ನಾಗಿ ಮತ್ತು ಹೆಗ್ಗಡೆಯವರ ಹೆಂಡತಿ ನಡುವಿನ ಸಂಭಾಷಣೆಯಲ್ಲಿ ನಿರೂಪಿತವಾಗಿದೆ. ಊರಿನವರೆಲ್ಲಾ ಬೇರೆ ಬೇರೆ ಕಡೆಗಳಿಗೆ ಹೋಗುತ್ತಾರೆ. ಆಗ ಗಣಪನಿಗೆ ತೋಟ, ಮನೆ, ಆಸ್ತಿಗಳು ಸಿಗುತ್ತವೆ.


ಪೋಲಿಸರು ಬಂದು ಬಲವಂತವಾಗಿ ದುಗ್ಗಜ್ಜನನ್ನು ಸೀತಾ ಪರ್ವತದಿಂದ ಎಳೆದೊಯ್ಯುತ್ತಾರೆ. ಆದರೆ ಸೀತಾ ಪರ್ವತ ಬಿಟ್ಟು ಬೀಗರ ಮನೆಯಲ್ಲಿ ಇರುವುದು ಅವನಿಗೆ ಇಷ್ಟವಾಗುವುದಿಲ್ಲ. ಬೇರೆ ಕೆಲಸ ಮಾಡುವುದು ಗಣಪನಿಗೆ ಅಸಾಧ್ಯ ಎಂಬ ಭಾವನೆ. ದುಗಜ್ಜ ತಿರುಗಿ ಸೀತಾ ಪರ್ವತಕ್ಕೆ ಓಡಿ ಹೋಗುತ್ತಾನೆ. ಗಣಪನಿಗೂ ಒಂದು ರೀತಿ ಅದೇ ಸರಿ ಎನಿಸುತ್ತದೆ. ಮತ್ತೆ ಎಲ್ಲಾ ಸೀತಾ ಪರ್ವತಕ್ಕೆ ಬರುತ್ತಾರೆ. ನಾಗಿಯ ಸಹಾಯಕ್ಕೆ ಕೃಷ್ಣನನ್ನು ಕಳುಹಿಸಿಕೊಡುವುದಾಗಿ ನಾಗಿಯ ಅಮ್ಮ ಹೇಳುತ್ತಾಳೆ.


ಇಲ್ಲಿಂದ ಕತೆ ಮುಖ್ಯ ಘಟ್ಟಕ್ಕೆ ಬರುತ್ತದೆ. ಬೇರೆ ಕೆಲಸ ಮಾಡುವುದಕ್ಕಿಂತ ಬೇಸಾಯ ಮಾಡುವುದೇ ಸೂಕ್ತ ಎಂದು ಗಣಪನಿಗೂ ಅನ್ನಿಸುತ್ತದೆ. ಅವರ ಸಹಾಯಕ್ಕೆ ಕೃಷ್ಣ ಬರುತ್ತಾನೆ. ನಾಗಿಗೆ ಕೃಷ್ಣನ ಮೇಲೆ ವಿಶೇಷ ಅಕ್ಕರೆ, ತವರು ಮನೆಯ ಕಡೆಯವನೆಂಬ ವಾಂಛಲ್ಯ, ಪಟ್ಟಣದಲ್ಲಿ ಓದಿ ಮುಂಬಾಯಿಯಲ್ಲಿ ಕೆಲಸ ಮಾಡಿದವನೆಂಬ ಹೆಮ್ಮೆ. ಅಲ್ಲದೆ ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವಷ್ಟು ಜ್ಞಾನವಿರೋ ಎಕೈಕ ಜೀವ. ಅವನನ್ನು ಕಂಡರೆ ಅವಳಿಗೆ ಸೋದರ ವಾತ್ಸಲ್ಯ. ಗಣಪನಿಗೂ ಕೃಷ್ಣನ ಆಗಮನ ಮೊದಲು ಖುಷಿಯಾಗುತ್ತದೆ. ಆದರೆ ಕೃಷ್ಣನು ತನ್ನೊಡನೆ ಪಂಥ ಕಟ್ಟಿ ಕೆಲಸಗಾರರನ್ನು ಕರೆದುಕೊಂಡು ಬರುವುದರಲ್ಲಿ ಯಶಸ್ವಿಯಾಗುವುದು ಅವನ ಅಹಂಕಾರಕ್ಕೆ ನುಂಗಲಾರದ ತುತ್ತಾಗುತ್ತದೆ. ತನ್ನ ದೌರ್ಬಲ್ಯಗಳನ್ನು ಅರಿತ ಅವನಿಗೆ ನಾಗಿ-ಕೃಷ್ಣ ಅನ್ಯೋನ್ಯವಾಗಿರುವುದನ್ನು ಸಹಿಸಲು ಸಾಧ್ಯವಾಗುವುದಿಲ್ಲಾ. ಗಣಪನಿಗೆ ಅಣೆಕಟ್ಟಿಗಿಂತ ಕೃಷ್ಣನೇ ದೊಡ್ಡ ಸಮಸ್ಯೆಯಾಗುತ್ತಾನೆ. ನಾಗಿಯ ಮನಸ್ಸಿನಲ್ಲಿ ಇರುವ ಅವನ ಪ್ರಭಾವವನ್ನು ಕುಗ್ಗಿಸಲು ದುಗಜ್ಜನ ಫೋಟೊ ತೆಗೆಯಬಾರದು ಎಂದು ಗಲಾಟೆ ಮಾಡುತ್ತಾನೆ. ಈ ಸೂಕ್ಷ್ಮ ಕೃಷ್ಣನಿಗೆ ಅರ್ಥವಾಗುವುದಿಲ್ಲಾ. ಈ ವೇಳೆಗೆ ಸೀತಾಪರ್ವತವು ಒಂದು ದ್ವೀಪವಾಗುತ್ತದೆ. ಹಾಗೆಯೆ ಗಣಪನ ಮನಸ್ಸು!!
ತನ್ನ ನಂಬಿಕೆಗಳು ಸೋತಿತೆಂದು ದುಗ್ಗಜ್ಜ ಕಂಗಾಲಾಗುತ್ತಾನೆ. ಆದರೂ ವಾಸ್ತವವನ್ನು ಒಪ್ಪಲು ತಯಾರಾಗುವುದಿಲ್ಲಾ. ತನ್ನ ವಿಚಾರ ಶಕ್ತಿಯನ್ನು ಕಳೆದು ಕೊಳ್ಳುತ್ತಾನೆ. ಮನೆ ಸಾಮಾನನ್ನು ಸಾಗಿಸುವಾಗ ಗಣಪ ಕೃಷ್ಣನಿಗೆ ಹಸು ಮತ್ತು ಕರುವನ್ನು ನೀರಿನಲ್ಲಿ ಹೊಡೆದುಕೊಂಡು ಬರುವಂತೆ ಪಂಥ ಕಟ್ಟುತ್ತಾನೆ. ಕೃಷ್ಣ ಸೋತು ನೀರಿನಲ್ಲಿ ಮುಳುಗಿ ಸಾಯುವುದು ಅವನಿಗೆ ಬಹು ಇಷ್ಟವಾಗುತ್ತದೆ. ಆದರೆ ನಾಗಿ ಅವನನ್ನು ಬದುಕಿಸುತ್ತಾಳೆ. ಕೃಷ್ಣ ಸೋತರೂ ನಾಗಿಯ ಅನುಕಂಪಕ್ಕೆ ಗುರಿಯಾಗುವುದು ಗಣಪನಿಗೆ ಸಹ್ಯವಾಗುವುದಿಲ್ಲಾ. ಅವನು ನಾಗಿಗೆ ಕೃಷ್ಣನನ್ನು ಕಳುಹಿಸುವಂತೆ ಹೇಳುತ್ತಾನೆ. ಪರಿಸ್ಥಿತಿಯ ಸೂಕ್ಷ್ಮ ಅರಿತ ನಾಗಿ ಪರಿಹಾರ ಸಿಗುವವರೆಗೂ ಅವನು ಇಲ್ಲಿ ಇರುತ್ತಾನೆ ಎಂಬ ಉಪಾಯ ಹೂಡುತ್ತಾಳೆ.


ಗಣಪನಿಗೂ ಆಫೀಸರಿಗೂ ನಡುವೆ ನಡೆಯುವ ವಾದ ಅನೇಕ ಸಾಮಾಜಿಕ ಪ್ರಶ್ನೆಗಳನ್ನು ವೀಕ್ಷಕರ ಮುಂದೆ ಇಡುತ್ತದೆ. ಇಷ್ಟವಿಲ್ಲದಿದ್ದರೂ ಕೃಷ್ಣನ ಭಯದಿಂದ ಗಣಪ ಫಾರಂ ತಂದು ತಂದೆಗೆ ಕೊಡುತ್ತಾನೆ. ತನ್ನ ಕಷ್ಟವನ್ನು ಅವನ ಮುಂದೆ ಇಡುತ್ತಾನೆ. ಆದರೆ ವಾಸ್ತವದ ಪರಿವೇ ಇಲ್ಲದ ದುಗ್ಗಜ್ಜನು ಇವಾವುದನ್ನು ಕೇಳದೆ ತಾನು ನೇಮ ಮಾಡುವುದಾಗಿ ಹೇಳುತ್ತಾನೆ. ಕಳೆ ಕೊಳೆ ಜೊಳ್ಳು ಎಲ್ಲಾ ಕೊಚ್ಚಿ ಹೋಗಲಿ ಎಂದು ಪ್ರಾರ್ಥಿಸಿ ನೇಮ ಮಾಡುತ್ತಾನೆ. ಭೂತದ ಜೊತೆ ಅವನೂ ಕೊಚ್ಚಿ ಹೊಗುತ್ತಾನೆ!!!


ಗಣಪ ತಂದೆಯು ತನಗೋಸ್ಕರ ಅಂದರೆ ಕೃಷ್ಣನಿಂದ ನಾಗಿಯನ್ನು ಕಾಪಾಡುವುದಕ್ಕೋಸ್ಕರ ನೇಮ ಮಾಡಿದನೆಂದು ಅರ್ಥ ಮಾಡಿಕೊಳ್ಳುತ್ತಾನೆ ಮತ್ತು ನಾಗಿಯ ಬಳಿಯೂ ಹಾಗೆ ಹೇಳುತ್ತಾನೆ. ಇದರಿಂದ ದುಗ್ಗಜ್ಜನ ಸಾವಿಗೆ ತಾನೆ ಕಾರಣನಾದೆ ಎಂಬ ಪಾಪಪ್ರಜ್ಞೆ ನಾಗಿಗೆ ಕಾಡಲು ಪ್ರಾರಂಭಿಸುತ್ತದೆ. ಅದಕ್ಕೆ ಪ್ರಾಯಶ್ಚಿತ್ತವಾಗಿ ಅವಳು ದ್ವೀಪ ಬಿಡದಿರಲು ನಿರ್ಧರಿಸುತ್ತಾಳೆ. ನಾಗಿ ಕೃಷ್ಣನ ಜೊತೆ ಮಾತಾಡುವುದನ್ನು ಬಿಡುತ್ತಾಳೆ. ಹಸುವನ್ನು ಹುಡುಕಲು ಸೀತಾ ಪರ್ವತಕ್ಕೆ ಹೋದಾಗ ಅವಳನ್ನು ಗಣಪ ಮತ್ತು ಕೃಷ್ಣ ಹಿಂಬಾಲಿಸಿ ಬರುತ್ತಾರೆ. ಗಣಪನು ಬರುವುದರೊಂದಿಗೆ ಅವರಿಬ್ಬರ ವೈಮನಸ್ಯ ಕಡಿಮೆಯಾಗುತ್ತದೆ. ಆದರೆ ಕೃಷ್ಣ ಬರುವಲ್ಲಿ ಅವಳಿಗೆ ಔಚಿತ್ಯ ಕಾಣುವುದಿಲ್ಲ. ಕೃಷ್ಣನನ್ನು ಕೂಡಲೆ ಹೊರಡುವಂತೆ ಹೇಳುತ್ತಾಳೆ. ಕೃಷ್ಣ ತಾನು ಹೋದರೆ ಇಲ್ಲೂ ಸೋತ ಹಾಗೆ ಆಗುತ್ತದೆಂದು ಪ್ರತಿಭಟಿಸುತ್ತಾನೆ. ಆದರೆ ನಾಗಿ ಅವನನ್ನು ಅಟ್ಟುತ್ತಾಳೆ. ಇರುವ ಒಂದು ದೋಣಿಯನ್ನೂ ಎತ್ತಿ ಕೊಂಡು ಹೋಗಿ ಕೃಷ್ಣ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಾನೆ.


ಇಷ್ಟು ಹೊತ್ತಿಗೆ ಎಲ್ಲಾದರಲ್ಲಿಯೂ ಸೋತ ಗಣಪ ತನ್ನ ಬಾಳಿಗೆ ಅರ್ಥವನ್ನು ಕಳೆದುಕೊಳ್ಳುತ್ತಾನೆ. ಬದುಕಿನಲ್ಲಿ ಕಾಣಲಾಗದ ಅರ್ಥ ಸಾವಿನಲ್ಲಿ ಕಾಣಲು ಪ್ರಯತ್ನಿಸುತ್ತಾನೆ. ಹುಲಿ ಇದೆ ಎಂದು ಗೊತ್ತಿದ್ದರೂ ಬೇಕೆಂದೆ ಹಿಂಬಾಗಿಲನ್ನು ಮುರಿದು ಮುಸುಕೆಳೆದು ಮಲಗುತ್ತಾನೆ. ನಾಗಿಗೆ ಗಣಪನ ವಿಚಿತ್ರ ವರ್ತನೆ ಅರ್ಥವಾಗುವುದೇ ಇಲ್ಲಾ. ರಾತ್ರಿಯಿಡಿ ಒಬ್ಬಂಟಿ ಹೋರಾಡಿ ಹುಲಿಯಿಂದ ತನ್ನ ಮನೆಯನ್ನು ರಕ್ಷಿಸಿಕೊಳ್ಳುತ್ತಾಳೆ. ಮರುದಿನ ಬೆಳಗ್ಗೆ ಎದ್ದಾಗ ಅಣೆಕಟ್ಟು ಪೂರ್ತಿಯಾದರು ಸೀತಾ ಪರ್ವತವು ಮುಳುಗದಿರುವುದು ನೋಡಿ ಇಬ್ಬರೂ ಖುಷಿ ಪಡುತ್ತಾರೆ. ನಮ್ಮ ಉಳಿವಿಗೆ ನಾವು ನಂಬಿದ ಭೂತವೇ ಕಾರಣ ಎಂದು ಗಣಪನು ಹೇಳುವುದರೊಂದಿಗೆ ನಾಗಿಯ ಪುರುಷ ಪ್ರಯತ್ನಕ್ಕೆ ತಣ್ಣೀರೆರೆಚಿದಂತಾಗುತ್ತದೆ. ತನ್ನ ಪ್ರಯತ್ನಗಳ ಬೆಲೆಯನ್ನೂ ಪಡಯದ ನಾಗಿಯ ಕತೆ ಮುಗಿಯುತ್ತದೆ.



ಇಡೀ ಚಿತ್ರದಲ್ಲಿ ಕತೆಯಲ್ಲಿ ಎಲ್ಲೂ ತಪ್ಪಿಲ್ಲ. ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಸ್ವರ್ಣಕಮಲ ಪಡೆದುದರಲ್ಲಿ ಯಾವುದೇ ಆಶ್ಚರ್ಯ ಇಲ್ಲಾ. ಛಾಯಾಗ್ರಹಣ ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಅಷ್ಟೆ. ಹಳೆಯ ಕಾಲದ ಕ್ಯಾಮೆರ ಈಗಿನ ಕ್ಯಾಮೆರಾಗಳಿಗೆ ಸೆಡ್ಡು ಹೊಡೆದು ನಿಂತಿದೆ. ಹಿನ್ನೆಲೆ ಸಂಗೀತವು ಚೆನ್ನಾಗಿದೆ. ಡಬ್ಬಿಂಗ್ ಮತ್ತು ವಸ್ತ್ರ ವಿನ್ಯಾಸ ಕೂಡ ಚೆನ್ನಾಗಿದೆ.


ಅಭಿನಯದಲ್ಲಿ ಎಲ್ಲರೂ ಮಿಂಚಿದ್ದಾರೆ. ಸೌಂದರ್ಯರಿಗೆ ರಾಷ್ಟ್ರ ಪ್ರಶಸ್ತಿ ಬರದಿದ್ದರೂ ರಾಜ್ಯ ಪ್ರಶಸ್ತಿ ಬಂದಿರುವುದು ಸಮಾಧಾನಕರ. ಅವಿನಾಶ್ ಮತ್ತು ವಾಸುದೇವ್‌ರಾವ್ ಸಹ ಅದ್ಭುತವಾಗಿ ನಟಿಸಿದ್ದಾರೆ. ಪೆದ್ದು ಪೆದ್ದಾದ ಪಾತ್ರ ಮಾಡಿರುವ ಹರೀಶ್ ಸಹ ಇಷ್ಟವಾಗುತ್ತಾರೆ.



ಕಣ್ಮನ ಸೆಳೆಯುವ ದೃಶ್ಯದೊಂದಿಗೆ ಪ್ರಾರಂಭವಾಗುವ ಈ ಚಿತ್ರದುದ್ದಕ್ಕೂ ಎಷ್ಟೋ ದೃಶ್ಯಗಳು ನೆನಪಿನಲ್ಲಿ ಉಳಿಯುತ್ತದೆ. ಪ್ರಾರಂಭದಲ್ಲಿ ನಾಗಿಯು ಗಣಪನಿಗೆ ಮುಳುಗಡೆ ಆಫೀಸಿಗೆ ಹೋಗಲು ಒಪ್ಪಿಸುವ ದೃಶ್ಯ, ಮುಳುಗಡೆ ಆಫೀಸಲ್ಲಿ ನಡೆಯುವ ವಾದಗಳು, ದುಗ್ಗಜ್ಜನಿಗೆ ಕೋಪ ಬರಿಸುವ ದೃಶ್ಯ ಚೆನ್ನಾಗಿದೆ. ಹೆಗ್ಗಡೆಯವರ ಹೆಂಡತಿ ಜೊತೆ ಸಂಭಾಷಣೆಯಲ್ಲಿ ಸೌಂದರ್ಯ ಪಕ್ಕಾ ಹಳ್ಳಿಯ ಜಾಣೆಯಂತೆ ನಟಿಸಿದ್ದಾರೆ. ನಾಗಿ ಭಟ್ಟರ ಮನೆಯವರಿಗೆ ಟಾಟಾ ಮಾಡುವ ದೃಶ್ಯದಲ್ಲಿ ಕ್ಯಾಮೆರ ಚೆನ್ನಾಗಿ ಕೆಲಸ ಮಾಡಿದೆ. ಕೃಷ್ಣನ ಆಗಮನದ ದೃಶ್ಯ ಹೊಸ ಹುರುಪನ್ನು ಕೊಡುತ್ತದೆ. ಅವಿನಾಶ್ "ನಂಗೆ ಫೋಟೊ ಬೇಡ್ದಾ" ಸನ್ನಿವೇಶದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ದೃಶ್ಯದಲ್ಲಿ ವಾಸುದೇವ್‌ರಾವ್ ಅವರ ಬದಲಾಗುವ ಮುಖಭಾವ...ವ್ಹಾಹ್..! ಹಾಗೆಯೆ ಕೃಷ್ಣನ ಅಣಕವೂ ಇಷ್ಟವಾಗುತ್ತದೆ.



ಕೃಷ್ಣನನ್ನು ನೀರಿನಲ್ಲಿ ಮುಳುಗಿಸಿ ಗೆಲುವಿನ ಸಂತೋಷದಲ್ಲಿ ಡೋಲು ಬಾರಿಸುವ, ನಂತರ ಪೆಚ್ಚಾಗುವ ಅವಿನಾಶ್‌ರ ಅಭಿನಯ, ಪ್ರೀತಿಯಲ್ಲಿ ಮೋಸಹೋಗಿ ನಾಗಿಯ ವಾತ್ಸಲ್ಯಕ್ಕೆ ಬೆರೆಗಾಗುವ ಹರೀಶ್, ಸೋದರ ವಾತ್ಸಲ್ಯ ತೋರುವ ನಾಗಿ ಪಾತ್ರದಲ್ಲಿ ಸೌಂದರ್ಯ, ಎಲ್ಲರ ಅಭಿನಯ ಕೂಡಿ ಒಂದು ಉತ್ತಮ ದೃಶ್ಯವಾಗಿದೆ. ಮಳೆಯಲ್ಲಿ ದುಗ್ಗಜ್ಜನ ಸಂಸ್ಕಾರದ ಸನ್ನಿವೇಶದಿಂದ ಹಿಡಿದು ಕಡೆಯವರೆಗೆ ಅಭಿನಯದಲ್ಲಿ ಸೌಂದರ್ಯ ಉಳಿದವರನ್ನು ಹಿಂದೆ ಹಾಕಿದ್ದಾರೆ. ನಿರ್ದೇಶಕರು ಮಳೆ ನಕ್ಷತ್ರ ಮತ್ತು ಅದರ ಮಹತ್ವವನ್ನು ತಿಳಿಸಿ ಕತೆಯ ಜಾಡಿನ ಬಗ್ಗೆ ಮೊದಲೆ ಸುಳಿವು ಕೊಡುತ್ತಾರೆ. ಹೀಗೆ ಮಳೆಯು ಒಂದು ಪಾತ್ರವಾಗುತ್ತದೆ.
ಒಟ್ಟಿನಲ್ಲಿ ಈ ಚಿತ್ರವು ಸಾಮಾಜಿಕ ಹೋರಾಟಕ್ಕಿಂತ ಮನುಷ್ಯನ ಮನಸ್ಸಿನ ಮೂಲ ಬೇರುಗಳನ್ನು ಶೋಧಿಸುವಲ್ಲಿ ಕೇಂದ್ರಿತವಾಗಿದೆ ಎಂದೆನಿಸುತ್ತದೆ.